"ಭರಣಿ - ಪಾರ್ವತಮ್ಮನ ಮಗ"

By Bharani on 7th Feb 2019

"ಭರಣಿ" - ಪಾರ್ವತಮ್ಮನ ಮಗ" ಈಗಾಗಲೇ ತನ್ನ ಚಿತ್ರದ ಟೀಸರ್ ಲಾಂಚ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕೈಯಿಂದ ಬಿಡುಗಡೆ ಮಾಡಿಕೊಂಡು ಸದ್ಯ ಮುಂದಿನ ಚಿತ್ರೀಕರಣವನ್ನು ನಡೆಸುತ್ತಿರುವ ಚಿತ್ರ. "ಭರಣಿ" ಚಿತ್ರದ ಶೇಕಡಾ ಮೂವತ್ತರಷ್ಟು ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ ಇನ್ನು ಚಿತ್ರದ ಇನ್ನುಳಿದ ಭಾಗವಷ್ಟೇ ಬಾಕಿ ಇದ್ದು ಅದು ಕೂಡ ಸದ್ಯದಲ್ಲೇ ಮುಗಿಯಲಿದೆ. ಚಿತ್ರ ಈಗಾಗಲೇ ಗಾಂಧಿ ನಗರದಲ್ಲೂ ತನ್ನ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ ಅಲ್ಲದೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಹೊಸ ಪ್ರತಿಭೆ ಚನಾನಿರಾಜ.


ಹೌದು ಚನಾನಿರಾಜ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾದರೂ ಈ ಹಿಂದೆ ಸಹ ನಿರ್ದೇಶಕರಾಗಿ ಹಲವಾರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಚಿತ್ರದಲ್ಲಿ ತಾಯಿಯ ಪಾತ್ರ ಬಹು ಮುಖ್ಯ ಪಾತ್ರವಾಗಿದ್ದು ಚಿತ್ರದುದ್ದಕ್ಕೂ ತಾಯಿ ಮತ್ತು ಅವಳ ಭಾವನೆಗಳನ್ನು ವ್ಯಕ್ತಪಡಿಸುವ ಕೆಲಸವನ್ನು ನಿರ್ದೇಶಕ ಚನಾನಿರಾಜ ಅವರು ಮಾಡಿದ್ದರಂತೆ. ತಾಯಿ ಭಾವನೆಗಳನ್ನೇ ಕಥೆಯ ವಸ್ತುವನ್ನಾಗಿಸಿಕೊಂಡು ಅದಕ್ಕೆ ಬೇಕಾದ ಕಮರ್ಷಿಯಲ್ ಟಚ್ ಕೊಟ್ಟು ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ.


ಇನ್ನು ಚಿತ್ರಕ್ಕೆ ಹಳ್ಳಿ ಸೊಗಡಿನ ಸಂಗೀತ ಬೇಕಿರುವುದರಿಂದ ಆ ಅನುಭವವಿರುವ ಸಂಗೀತ ನಿರ್ದೇಶಕ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನವಿರಲಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟಿ ತಾರಾ ಅವರೊಂದಿಗೆ ಮಾಧವ, ಕುಂದಾಪುರ ಸೂರಿ ಮತ್ತು ಸ್ವಾತಿ ಕೊಂಡೆ ಅಭಿನಯಿಸಿದ್ದಾರೆ. ಚಿತ್ರದ ಇನ್ನುಳಿದ ತಾರಾಬಳಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಇನ್ನು ಮಾಹಿತಿ ಇಲ್ಲ. ನಿರ್ದೇಶಕ ಚನಾನಿರಾಜ ಅವರ ಪ್ರಕಾರ ಈ ವರ್ಷದ ಮೇ ತಿಂಗಳಲ್ಲಿ ಪ್ರೇಕ್ಷಕನ ಮುಂದೆ "ಭರಣಿ" ಅಬ್ಬರಿಸಲಿದೆ.


ತಾಯಿ ಇದ್ದರೂ ಇಲ್ಲದಿದ್ದರೂ ಅವಳ ಪ್ರೀತಿ ಯಾವಾಗಲು ಒಂದೇ ಬದುಕಿದ್ದಾಗ ಎದುರಿಗೆ ಸತ್ತ ಮೇಲೆ ಗೋರಿಯಲ್ಲಿ ಹೀಗೆ ತಾಯಿ ಎಲ್ಲೇ ಇದ್ದರು ನಮ್ಮ ಜೊತೆಯಲ್ಲೇ ಇರುತ್ತಾರೆ ಎನ್ನುವ ಭಾವನೆಯೊಂದಿಗೆ ಜೀವನ ನಡೆಸುವ ಪರಿಯನ್ನು ಭರಣಿ ತೋರಿಸಿಕೊಡಲಿದೆ. ಅಲ್ಲದೆ ತಾಯಿ ಇಲ್ಲ ಎಂದು ಭಾವಿಸುವ ಬದಲು ಅವಳು ನಮ್ಮ ಜೊತೆಯಲ್ಲೇ ಹೆಂಡತಿಯ ರೂಪದಲ್ಲಿ, ಮಗಳ ಅಥವಾ ಅಕ್ಕ ತಂಗಿಯರ ರೂಪದಲ್ಲಿ ನಮ್ಮೊಡನೆಯೇ ಇರುತ್ತಾಳೆ ಎಂದುಕೊಳ್ಳಬೇಕೆನ್ನುವುದು ನಿರ್ದೇಶಕರ ಇಂಗಿತ.


ಭೂಮಿಯ ಮೇಲೆ ತಾಯಿ ಪಾತ್ರ ಬಹಳ ಅಮೂಲ್ಯವಾದದ್ದು ಅಂತಹ ತಾಯಿಯನ್ನು ಕಥಾವಸ್ತುವನ್ನಾಗಿಸಿಕೊಂಡು ತೆರೆಯ ಮೇಲೆ ಬರಲು ಸಿದ್ಧವಾಗುತ್ತಿರುವ ಚಿತ್ರ ಭರಣಿ. ಇಂತಹ ಅಮೂಲ್ಯ ಪ್ರಯತ್ನಕ್ಕೊಂದು ಧನ್ಯವಾದ ತಿಳಿಸುತ್ತ ಚಿತ್ರಕ್ಕೆ ಅಂದುಕೊಂಡದ್ದಕ್ಕಿಂತ ಹೆಚ್ಚೇ ಯಶಸ್ಸು ಸಿಗಲಿ ಈ ಚಿತ್ರದಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರಲಿಮತ್ತು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲಿ ಎನ್ನುವುದು ನಮ್ಮ ತಂಡದ ಅಭಿಪ್ರಾಯ.