"ಗಿರಗಿಟ್ಲೆ" ಕನ್ನಡ ಚಿತ್ರದ ನಿರ್ದೇಶಕರಾದ "ರವಿ ಕಿರಣ್" ಅವರೊಂದಿಗಿನ ಸಂದರ್ಶನ

By Girgitle on 6th Aug 2016


"ಗಿರಗಿಟ್ಲೆ" ಕನ್ನಡದಲ್ಲಿ ಹಲವಾರು ವಿಶೇಷತೆಗಳನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ "ರಿಯಲ್ ಸ್ಟಾರ್ ಉಪೇಂದ್ರ" ಅವರ ಗರಡಿಯಲ್ಲಿ ಪಳಗಿದ ಈ ಚಿತ್ರದ ನಿರ್ದೇಶಕರಾದ "ರವಿ ಕಿರಣ್" ಅವರೊಂದಿಗಿನ ಚುಟುಕು ಸಂದರ್ಶನ.


1. ನಿಮ್ಮ ಚಿತ್ರರಂಗದ ಪಯಣದ ಬಗ್ಗೆ ಹೇಳಿ

ನನಗೆ ನನ್ನ ನೆಚ್ಚಿನ ನಟರಾದ ಉಪೇಂದ್ರ ಅವರ ಬಳಿಯಲ್ಲಿ ಕೆಲಸ ಮಾಡಿದ ಅನುಭವ ಇದೆ, ಚಿತ್ರರಂಗದಲ್ಲಿ ನಾನು ಹಲವಾರು ಚಿತ್ರಗಳಿಗೆ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣಕಾರನಾಗಿ ಕೆಲಸ ಮಾಡಿದ್ದೇನೆ. ದುನಿಯಾ ವಿಜಯ್ ಅವರ ಅಭಿನಯದ "ಜಾಕ್ಸನ್" ಚಿತ್ರಕ್ಕಾಗಿ ಸ್ಕ್ರೀನ್ ಪ್ಲೇ - ಸಂಭಾಷಣೆ ಮತ್ತು ಸೃಜನ್ ಲೋಕೇಶ್ ಅಭಿನಯದ "ಸಪ್ನೋಂಕಿ ರಾಣಿ" ಚಿತ್ರಕ್ಕೆ ಎರಡು ಹಾಡುಗಳು ಮತ್ತು ಸಂಭಾಷಣೆಯನ್ನು ಬರೆದಿದ್ದೇನೆ.


2. ನಿಮ್ಮ ಚಿತ್ರ ಗಿರಗಿಟ್ಲೆ (ಬ್ರಾಂಡೆಡ್ ಅಲ್ಲ ಲೋಕಲ್) ಬಗ್ಗೆ ಹೇಳಿ

ಗಿರಗಿಟ್ಲೆ ಅಂತ ಚಿತ್ರಕ್ಕೆ ಹೆಸರಿಡಲು ಕಾರಣ ಒಂದೆರಡು ಬಾರಿ ಸುತ್ತಿದ ನಂತರ ತಲೆ ತಿರುಗುವ ಅನುಭವ ಆಗುತ್ತದೆ ನಮ್ಮ ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೆ ಆ ಅನುಭವ ಆಗಲಿದೆ ಹೀಗಾಗಿ ಚಿತ್ರಕ್ಕೆ "ಗಿರಗಿಟ್ಲೆ" ಅನ್ನೋ ಟೈಟಲ್ ಸೂಕ್ತ ಅನಿಸಿತು. ಗಿರಗಿಟ್ಲೆ ರೆಗ್ಯುಲರ್ ಚಿತ್ರಗಳ ಸಾಲಿನಲ್ಲಿ ಸೇರುವ ಚಿತ್ರ ಅಲ್ಲ ಪ್ರತಿಯೊಂದು ಫ್ರೇಮ್ ನಲ್ಲಿಯೂ, ಪ್ರತಿಯೊಂದು ಪ್ರಾಪರ್ಟೀಸ್, ಪ್ರತಿಯೊಂದು ಪಾತ್ರದಲ್ಲಿಯೂ ಚಿತ್ರ ಹಲವಾರು ವಿಭಿನ್ನತೆಗಳಿಂದ ಕೂಡಿದೆ. ಇಲ್ಲಿಯ ವರೆಗೂ ಕನ್ನಡದಲ್ಲಿ ಇಂತ ಚಿತ್ರ ಮಾಡುವ ಪ್ರಯತ್ನಗಳು ನಡೆದಿಲ್ಲ ಹಲವಾರು ಮಾಸ್ ಕಾಮಿಡಿ ಚಿತ್ರಗಳು ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಂದಿದ್ದರು ಸಹ ನಮ್ಮ ಚಿತ್ರದ ತರಹ ತೀರಾ ಲೋಕಲ್ ಫ್ಲೇವರ್ ಅಲ್ಲಿ ಚಿತ್ರ ಬಂದಿಲ್ಲ ನಮ್ಮ ಚಿತ್ರ ಅದನ್ನ ಪೂರೈಸಲಿದೆ.


3. ಮೊದಲ ಬಾರಿ ನಿರ್ದೇಶನ ಮಾಡುವ ಅನುಭವ ಹೇಗಿದೆ

ಅಸಿಸ್ಟಂಟ್ ಆಗಿ ಕೆಲಸ ಮಾಡಿ ಅನುಭವ ಇರುವ ಕಾರಣ ನನಗೆ ಡೈರೆಕ್ಷನ್ ಕಷ್ಟವಾಗಿಲ್ಲ ಅತಿಯಾದ ಪ್ರೀತಿ ಮತ್ತು ಶ್ರದ್ದೆಯಿಂದ ನಿರ್ದೇಶನದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಆದರೆ ನಿರ್ಮಾಪಕರ ಹುಡುಕಾಟದಲ್ಲಿ ಕೊಂಚ ಸಮಯ ಹೆಚ್ಚೇ ವ್ಯಹಿಸಿದ್ದೇನೆಂದರೆ ತಪ್ಪಾಗಲ್ಲ ಈ ಚಿತ್ರದಿಂದ ನಾನು ಹೆಸರು ಮಾಡುವುದಕ್ಕಿಂತ ನಟರಾದ ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಕಲಿತವನು ನಾನು ಹೀಗಾಗಿ ಅವರ ಹೆಸರಿಗೆ ಯಾವುದೇ ಧಕ್ಕೆ ತರದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ.


4. ಚಿತ್ರದ ತಾಂತ್ರಿಕ (ಟೆಕ್ನಿಕಲ್) ವಿಚಾರಗಳ ಬಗ್ಗೆ ಹೇಳಿ

ಹೌದು ಚಿತ್ರದಲ್ಲಿ ಬಹು ಮುಖ್ಯವಾದ ತಾಂತ್ರಿಕ ವಿಚಾರ ಎಂದರೆ ನಾವು ಕನ್ನಡಲ್ಲಿ ಈ ಹಿಂದೆ ಯಾರು ಮಾಡದ ಪ್ರಯತ್ನವನ್ನ ಮಾಡಿದ್ದೇವೆ. "ರೆಡ್ ವೆಪನ್" ಎಂಬ ಹೊಸ ಕ್ಯಾಮರಾ ಬಳಸಿ ಗಿರಗಿಟ್ಲೆ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. "ರೆಡ್ ವೆಪನ್" ತೆಲುಗಿನ ಸೂಪರ್ ಹಿಟ್ ಚಿತ್ರ "ಬಾಹುಬಲಿ" ಯಲ್ಲಿ ಮತ್ತು ಮಹೇಶ್ ಬಾಬು ಅಭಿನಯದ ಒಂದು ಚಿತ್ರದಲ್ಲಿ ಬಿಟ್ಟರೆ ಕನ್ನಡದಲ್ಲಿ ನಮ್ಮ ಚಿತ್ರದ ಮೂಲಕ ಇದೊಂದು ತಾಂತ್ರಿಕ ಪ್ರಯತ್ನ ನಡೆದಿದೆ. ಟೆಕ್ನಿಕಲ್ ಆಗಿ ತುಂಬಾ ವಿಶೇಷತೆಗಳಿಂದ ಕೂಡಿದೆ. ಅಲ್ಲದೆ ಚಿತ್ರದ ಕಥೆ ಮೇಲೆ ಬಹಳಷ್ಟು ಸಮಯ ಕಳೆದಿರುವುದರಿಂದ ಪ್ರೇಕ್ಷಕರಿಗೆ ಚಿತ್ರ ಎಲ್ಲೂ ಬೋರ್ ಆಗಬಾರದು ಅಂತ ಕಾಳಜಿ ವಹಿಸಿದ್ದೆವೆ.


5. ಚಿತ್ರದ ತಾರಾಬಳಗದ ಬಗ್ಗೆ ಹೇಳಿ

ಪ್ರಮುಖವಾಗಿ ಚಿತ್ರಕ್ಕೆ ಗಿರೀಶ್ ಎಂಬುವವರು ಬಂಡವಾಳ ಹಾಕಿದ್ದಾರೆ ಮತ್ತು ತಿಮ್ಮರಾಜು ಅವರು ಸಹ - ನಿರ್ಮಾಪಕರಾಗಿದ್ದಾರೆ. ಚಿತ್ರದ ಮುಖ್ಯ ತಾರಾಬಳಗದಲ್ಲಿ ರಂಗಾಯಣ ರಘು, ಶ್ರೀನಗರ ಕಿಟ್ಟಿ(ಅಥಿತಿ ಪಾತ್ರ), ವೈಷ್ಣವಿ, ಅಧ್ವಿತಿ ಶೆಟ್ಟಿ ಮತ್ತು ಈ ಹಿಂದೆ ಹಲವಾರು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ಅನುಭವವಿರುವ ಗುರು, ಪ್ರದೀಪ್, ಚಂದ್ರು ಎಂಬ ಮೂವರು ನಟರನ್ನು ಕನ್ನಡಕ್ಕೆ ಪರಿಚಯಿಸುತ್ತಿದ್ದೇವೆ. ಇನ್ನು ಖಳ ನಟರಾಗಿ ರಾಘವ ಉದಯ್, ಕೋಟೆ ಪ್ರಭಾಕರ್, ಪೆಟ್ರೊಲ್ ಪ್ರಸನ್ನ ನಟಿಸಿದ್ದಾರೆ ಮತ್ತು ಹಾಸ್ಯ ನಟರಾಗಿ ಲಯ ಕೋಕಿಲ (ಲಯೇಂದ್ರ), ಓಂ ಪ್ರಕಾಶ್ ರಾವ್ ಅಭಿನಯಿಸಿದ್ದಾರೆ, ಬಹು ದಿನಗಳ ಹಿಂದೆ ಸೆಂಟ್ರಲ್ ಜೈಲ್ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ಹಿರಿಯ ನಟ ಸತ್ಯ ಪ್ರಕಾಶ್ ರನ್ನು ಬರೋಬ್ಬರಿ 20 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕರೆತಂದಿದ್ದೇವೆ. ಇನ್ನು ಈ ಹಿಂದೆ ಕ್ವಾಟ್ಲೆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಿಯೋ ಅವರೇ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು, ಸತತ 300 ಕನ್ನಡ ಚಿತ್ರಗಳಿಗೆ ರೀ ರೆಕಾರ್ಡಿಂಗ್ ಮಾಡಿ ಅನುಭವವಿರುವ ಸತೀಶ್ ಬಾಬು ಈ ಚಿತ್ರಕ್ಕೂ ರೀ ರೆಕಾರ್ಡಿಂಗ್ ಮಾಡಿದ್ದಾರೆ, ಚಿತ್ರಕ್ಕೆ ಕೆ ಎಂ ಪ್ರಕಾಶ್ ರ ಸಂಕಲದೊಂದಿಗೆ ಅರುಣ್ ಸುರೇಶ ಅವರ ಛಾಯಾಗ್ರಹಣವಿದೆ.


6. ಕೊನೆಯದಾಗಿ ಗಿರಗಿಟ್ಲೆ ಬಗ್ಗೆ ಪ್ರೇಕ್ಷಕರಿಗೆ ಏನು ಹೇಳುತ್ತೀರಾ

ನನ್ನ ಸ್ಟೈಲ್ ನಲ್ಲಿ ಹೇಳ್ಬೇಕು ಅಂದ್ರೆ ಕುಡಿಯೋ ಅನುಭವ ಇರೋ ಪ್ರೇಕ್ಷಕರಿಗೆ ಒಂದು 90 ಹೊಡೆದಾಗ ಬರೋ ಕಿಕ್ ನ ಗಿರಗಿಟ್ಲೆ ನೀಡುತ್ತೆ, ಕುಡಿತದ ಅಭ್ಯಾಸ ಇಲ್ಲದ ಪ್ರೇಕ್ಷಕರಿಗೆ ಕುಡಿದಾಗ ಹೇಗೆ ಇರುತ್ತೆ ಕುಡಿದಾಗ ಈಗೆ ಆಗುತ್ತೇನೋ ಅನ್ನೋ ಅನುಭವನಾ ಗಿರಗಿಟ್ಲೆ ಮೂಲಕ ಪಡಿಬೋದಾಗಿದೆ. ಜೋಕ್ಸ್ ಅಪಾರ್ಟ್ ಅನ್ನೋದಾದ್ರೆ ಗಿರಗಿಟ್ಲೆ ನೋಡೋಕೆ ಬರೋ ಪ್ರೇಕ್ಷಕರಿಗೆ ಯಾವುದೇ ನಿರಾಸೆ ಆಗೋಲ್ಲ ಆ ರೀತಿ ಚಿತ್ರ ಇರುತ್ತೆ. ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಗೆ ಬಂದ ನಂತರ ಅವರಿಗೆ ಒಂದು ಒಳ್ಳೆ ಚಿತ್ರ ನೋಡಿದ ಅನುಭವ ಮತ್ತು ನಮ್ಮ ಚಿತ್ರದಿಂದ ಹಲವಾರು ಒಳ್ಳೆ ವಿಚಾರಗಳನ್ನು ತಿಳಿಸುವ ಪ್ರಯತ್ನ ಈ ಚಿತ್ರ ಮಾಡುತ್ತೆ ಅನ್ನೋ ಭರವಸೆ ಇದೆ.


ತಮ್ಮ ಚಿತ್ರದ ಬಗ್ಗೆ ಹಲವಾರು ವಿಷಯಗಳನ್ನು ನಮಗೆ ತಿಳಿಸಿದ ಗಿರಗಿಟ್ಲೆ ಚಿತ್ರದ ನಿರ್ದೇಶಕ "ರವಿ ಕಿರಣ್" ಅವರಿಗೆ 99doing ಟೀಮ್ ಕಡೆಯಿಂದ ತುಂಬು ಹೃದಯದ ಧನ್ಯವಾದ ಮತ್ತು ಅನೇಕ ವಿಶೇಷತೆಗಳನ್ನು ಹೊತ್ತುಕೊಂಡು ಪ್ರೇಕ್ಷಕರನ್ನು ಗಿರಗಿಟ್ಲೆ ಆಡಿಸ್ಬೇಕು ಅಂತ ಬರ್ತಿರೋ ಚಿತ್ರ "ಗಿರಗಿಟ್ಲೆ" ಚಿತ್ರಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಯಶಸ್ಸು ಸಿಗಲಿ All the best "GIRGITLE".


Article By - ಸೌಮ್ಯ